ಮುಖಪುಟ

ಸರಳ ಕುರ್‌ಆನ್ - ಕನ್ನಡದಲ್ಲಿ


ಮುನ್ನುಡಿ

ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... !

بسم الله الرحمن الرحيم، الحمد لله رب العالمين، اللهم صلِّ وسلم وبارك على عبدك ورسولك محمد، أشرف الأنبياء وأشرف المرسلين، وعلى آله وأصحابه أجمعين. وبعد ؛

ಲೋಕದ ಜನರ ಮಾರ್ಗದರ್ಶನಕ್ಕಾಗಿ ವಿವಿಧ ಕಾಲಗಳಲ್ಲಿ ವಿವಿಧ ದಿವ್ಯ ಗ್ರಂಥಗಳನ್ನು ಕಳಿಸಲಾಗಿತ್ತು ಎಂದು ಕುರ್‌ಆನ್ ಸಾರುತ್ತದೆ. ಪ್ರವಾದಿಗಳಾದ ಡೇವಿಡ್, ಮೋಸೆಸ್, ಜೀಸಸ್ ಮುಂತಾದವರು ಅಂತಹ ದಿವ್ಯ ಗ್ರಂಥಗಳನ್ನು ತಮ್ಮ ತಮ್ಮ ಕಾಲದ ಜನರಿಗೆ ನೀಡಿದ್ದರು. ಅಂತಹ ದಿವ್ಯ ಗ್ರಂಥಗಳ ಶ್ರೇಣಿಗೆ ಸೇರಿದ ಅಂತಿಮ ಗ್ರಂಥವೇ ಪವಿತ್ರ ಕುರ್‌ಆನ್. ಅದು ಪ್ರವಾದಿಗಳಲ್ಲಿ ಅತ್ಯಂತ ಕೊನೆಯವರಾದ ಮುಹಮ್ಮದ್ (ಸ) ರವರಿಗೆ, ಸಮಯ ಮತ್ತು ವಿದ್ಯಮಾನಗಳ ಬೇಡಿಕೆಗೆ ತಕ್ಕಂತೆ, ಹಂತಹಂತವಾಗಿ ಅಲ್ಲಾಹ್ ನು ಕಳಿಸಿಕೊಟ್ಟ ದಿವ್ಯ ಸಂದೇಶದ ಸಂಕಲನವಾಗಿದ್ದು, ಇಂದಿಗೂ ಅದರ ಮೂಲ ರೂಪ ಮತ್ತು ಮೂಲ ಭಾಷೆಯಲ್ಲಿ ಸುರಕ್ಷಿತವಾಗಿ ಉಳಿದಿರುವ ಏಕಮಾತ್ರ ದಿವ್ಯ ಗ್ರಂಥ.

ಕನ್ನಡ ಭಾಷೆಯಲ್ಲಿ ಆದರಣೀಯ ಕುರ್‌ಆನ್ ನ ಹಲವು ಅನುವಾದ ಗ್ರಂಥಗಳು ಲಭ್ಯವಿದೆ. ಪ್ರತಿಯೊಂದು ಅನುವಾದವೂ ಸಹ ಕನ್ನಡಿಗರ ಪಾಲಿಗೆ ಒಂದು ಅಮೂಲ್ಯ ಉಡುಗೊರೆಯಂತಿದ್ದು ಕನ್ನಡಿಗರು ತುಂಬು ಹೃದಯದಿಂದ ಅದನ್ನು ಸ್ವೀಕರಿಸಿದ್ದಾರೆ. ಅವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಹೆಚ್ಚುತ್ತಿರುವ ಜ್ಞಾನದಾಹವನ್ನು ತಣಿಸಲು ಓದುಗರಿಗೆ ಸಹಾಯಕಾರಿಯಾಗಿದೆ. ಅಂತಹ ಅನುವಾದ ಗ್ರಂಥಗಳಲ್ಲಿ ಕೆಲವು ಅಂತರ್ಜಾಲದಲ್ಲಿ ಉಪಲಬ್ಧವಿರುವುದು ಓದುಗರಿಗೆ ಮತ್ತಷ್ಟು ಪ್ರಯೋಜನಕಾರಿಯಾಗಿದೆ. ಅಂತೆಯೇ ಕುರ್‌ಆನ್ ನ ವಚನಗಳ ಅರ್ಥವಿವರಣೆ ನೀಡುವ ವ್ಯಾಖ್ಯಾನ ಗ್ರಂಥವೂ ಕನ್ನಡಿಗರಿಗೆ ಈಗಾಗಲೇ ಲಭ್ಯವಿದೆ.

ಶಾಸ್ತ್ರೀಯ ಅರೇಬಿಕ್ (classical arabic ಅಥವಾ quranic arabic) ಭಾಷೆಯಲ್ಲಿರುವ ಕುರ್‌ಆನ್ ಗ್ರಂಥದ ಆಯತ್‍ ಗಳನ್ನು (ಅರ್ಥಾತ್ ವಚನಗಳನ್ನು) ವ್ಯಾಖ್ಯಾನಿಸುವ ತಫ್ಸೀರ್ ಗ್ರಂಥಗಳ ಸಹಾಯವಿಲ್ಲದೆ ಒಬ್ಬ ಸಾಮಾನ್ಯ ಓದುಗನಿಗೆ ಆಯತ್ ಗಳ ಇಂಗಿತವು ಸುಲಭವಾಗಿ ಮತ್ತು ಗೊಂದಲ ರಹಿತವಾಗಿ ಅರ್ಥವಾಗುವಂತೆ ಮಾಡಲು ಈ ಅನುವಾದ ಕೃತಿಯಲ್ಲಿ ವಿಷೇಶವಾದ ಮುತುವರ್ಜಿ ವಹಿಸಲಾಗಿದೆ.

ಒಂದು ಗ್ರಂಥವನ್ನು ಭಾಷಾಂತರಿಸುವಾಗ ಸಹಜವಾಗಿಯೇ ಎದುರಾಗುವ ಹಲವು ಸಮಸ್ಯೆಗಳು ಇಲ್ಲಿಯೂ ಇವೆ. ಮೂಲದಲ್ಲಿರುವ ಶಬ್ಧಗಳನ್ನು ಹಾಗೆಯೇ ಅನುವಾದಿಸಿ ಇಡಬೇಕೇ ಅಥವಾ ಅವು ವ್ಯಂಜಿಸುವ ಭಾವಗಳನ್ನು ಉದ್ದೇಶಿತ ಭಾಷೆಗೆ ವರ್ಗಾಯಿಸಬೇಕೇ ಎಂಬುದೂ ಅದರಲ್ಲೊಂದು. ಭಾಷಾಂತರ ಪ್ರಕ್ರಿಯೆ ಒಂದೇ ಭಾಷಾ ಕುಟುಂಬಕ್ಕೆ ಸೇರಿದ ಎರಡು ಭಾಷೆಗಳ ನಡುವೆ ಅಥವಾ ಉಪಭಾಷೆಗಳ ನಡುವೆ ನಡೆಯುವಾಗ ಅದು ಅಷ್ಟೊಂದು ತೊಡಕಾಗುವುದಿಲ್ಲ. ಆದರೆ ಎರಡು ವಿಭಿನ್ನ ಬೌಗೋಳಿಕ ಪ್ರದೇಶಗಳ, ವಿಭಿನ್ನ ವ್ಯಾಕರಣಾ ನಿಯಮಗಳನ್ನು ಪಾಲಿಸುವ ಮತ್ತು ಪರಸ್ಪರ ಯಾವ ಸಂಬಂಧವೂ ಇಲ್ಲದ ಎರಡು ಭಾಷೆಗಳ ನಡುವೆ ಭಾಷಾಂತರ ಪ್ರಕ್ರಿಯೆ ನಡೆಯುವಾಗ ಈ ಸಮಸ್ಯೆ ಹೆಚ್ಚು ಗಂಭೀರವಾಗುತ್ತದೆ. ಸಾವಿರದ ನಾಲ್ಕು ನೂರು ವರ್ಷಗಳ ಹಿಂದೆ ಅರೇಬಿಯಾದ ಹಿಜಾಝ್ ಪ್ರಾಂತ್ಯದಲ್ಲಿ ಪ್ರಚಲಿತವಿದ್ದ ಅಭಿಜಾತ ಅರಬಿ ಭಾಷೆಯ ಒಂದು ಮೇರುಗ್ರಂಥವನ್ನು ಇಂದಿನ ಕನ್ನಡಕ್ಕೆ ಅನುವಾದ ಮಾಡುವಾಗ ಎದುರಾಗುವ ತೊಡಕು ಮತ್ತಷ್ಟು ಜಟಿಲ ಸ್ವರೂಪದ್ದು. ಗ್ರಂಥದ ಘನತೆಯನ್ನು ಮನದಲ್ಲಿಟ್ಟುಕೊಂಡು ಶಬ್ಧಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಯಾವುದು ಹೆಚ್ಚು ಸರಿ, ಯಾವುದು ಹೆಚ್ಚು ಪರಿಣಾಮಕಾರಿ ಎಂಬುದನ್ನು ತೀರ್ಮಾನಿಸಿ ಸಾಧ್ಯವಾದಷ್ಟು ಸೂಕ್ತವೆನಿಸಿದ ಸಂವಾದಿ ಶಬ್ಧಗಳನ್ನು ಬಳಸಲು ಇಲ್ಲಿ ಪ್ರಯತ್ನ ಮಾಡಲಾಗಿದೆ.

ಇನ್ನು, ಕೆಲವು ಅರಬಿ ಪಾರಿಭಾಷಿಕಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಗೋಜಿಗೆ ಹೋಗದೆ ಕೇವಲ ಲಿಪ್ಯಂತರಣ ಮಾಡಿ ಅವುಗಳನ್ನು ಮೂಲ ಉಚ್ಛರಣಾ ರೂಪದಪದಲ್ಲೇ ಇರಿಸಬೇಕಾದ ಅನಿವಾರ್ಯವೂ ಎದುರಾಗುತ್ತದೆ. ಕೆಲವೊಂದು ಅರಬಿ ಶಬ್ಧಗಳಿಗೆ ಕನ್ನಡ ಪರ್ಯಾಯವು ಇಲ್ಲದೇ ಇರುವ ಕಾರಣದಿಂದಲೂ, ಮತ್ತು ಕೆಲವ ಪದಗಳಿಗೆ ಒಮ್ಮೆಲೇ ಹತ್ತು ಹಲವು ಅರ್ಥಗಳಿರುವ ಕಾರಣದಿಂದಲೂ ಹಾಗೆ ಮಾಡುವುದು ಅನುವಾದಕನ ಅನಿವಾರ್ಯ. ಕೆಲವು ಪದಗಳನ್ನು ಬಲವಂತವಾಗಿ ಅನುವಾದಿಸಲು ಪ್ರಯತ್ನಿಸಿದರೆ ಅಪಾರ್ಥ ಉಂಟಾಗುವ ಸಾಧ್ಯತೆಯೂ ಇಲ್ಲವೆಂದಿಲ್ಲ. ಆದ್ದರಿಂದ ಓದುಗರ ಅನುಕೂಲಕ್ಕಾಗಿ ಅಂತಹ ಶಬ್ಧಗಳ ಒಂದು ಪಟ್ಟಿಯನ್ನು ರಚಿಸಿ ಅರ್ಥವವಿರಣೆ ಸಮೇತ ಒಂದು ಪ್ರತ್ಯೇಕ ಪುಟದಲ್ಲಿ ಶೀಘ್ರದಲ್ಲೇ ಪ್ರಕಟಿಸಲಾಗುವುದು.

ಈ ಅನುವಾದ ಕೃತಿಯಲ್ಲಿ ಹೆಚ್ಚು ಒತ್ತು ನೀಡಲಾದ ಮತ್ತೊಂದು ವಿಷಯವೆಂದರೆ ಆಯತ್ ಗಳ ನಡುವಿನ ಹೊಂದಾಣಿಕೆ ಮತ್ತು ಆಯತ್ ಗಳ ಪರಸ್ಪರ ನಂಟು - ಇವು ತರ್ಜುಮೆಯಲ್ಲೊ ಬಾಕಿ ಉಳಿಯುವಂತೆ ಪ್ರಯತ್ನಿಸಿರುವುದು. ವಚನಗಳು ಪರಸ್ಪರ ಸಂಬಂಧವಿಲ್ಲದೆ ಚದುರಿ ಬಿದ್ದ ಪ್ರತ್ಯೇಕ ವಾಕ್ಯಗಳಂತೆ ಓದುಗರಿಗೆ ಭಾಸವಾಗಬಾರದು; ಮೂಲದಲ್ಲಿರುವ ಅನುಕ್ರಮಣಿಕೆಯನ್ನು ಅನುವಾದದಲ್ಲೂ ಬರಿಸಲು ಪ್ರಯತ್ನಿಸಬೇಕು ಎಂಬುದು ಈ ಅನುವಾದದ ಮುಖ್ಯ ಧ್ಯೇಯೆಗಳಲ್ಲೊಂದು.

ಯಥಾರ್ಥದಲ್ಲಿ ಅರಬಿ ಮೂಲದಲ್ಲಿರುವ ಕುರ್‌ಆನ್ ನ ಆಯತ್ ಗಳ ನಡುವೆ ಸರಾಗವಾಗಿ ವಿಸ್ಮಯಕಾರಿಯಾಗಿ ಉದ್ದಕ್ಕೂ ಸಾಗಿರುವ ಹೊಂದಾಣಿಕೆ ಮತ್ತು ಪರಸ್ಪರ ನಂಟನ್ನು ಅದರ ಅವಿಸ್ಮರಣೀಯ ಸೌಂದರ್ಯಕ್ಕೆ ಧಕ್ಕೆ ಬಾರದಂತೆ ಕನ್ನಡಕ್ಕಾಗಲಿ ಅಥವಾ ಬೇರೆ ಯಾವುದೇ ಭಾಷೆಗಾಗಲಿ ವರ್ಗಾಯಿಸುವುದು ಸಾಧ್ಯವಾಗುವ ಮಾತಲ್ಲ. ಇಲ್ಲಿ ನಡೆಸಿರುವುದು ಆ ನಿಟ್ಟಿನಲ್ಲಿ ಒಂದು ಪ್ರಯತ್ನ ಮಾತ್ರ! ತರ್ಜುಮೆಗಾರರ ಇಂತಹ ಸಹಜವಾದ ಇತಿಮಿತಿಗಳನ್ನು ಅರ್ಥ ಮಾಡಿಕೊಳ್ಳುವುದೂ ಸಹ ಸಹೃದಯಿ ಓದುಗರ ಹೃದಯವಂತಿಕೆ ಎಂದೇ ಹೇಳಬೇಕು.

ಅನುವಾದಗೊಂಡ ಕೆಲವು ಸೂರಃ ಗಳನ್ನು (ಅರ್ಥಾತ್ ಅಧ್ಯಾಯಗಳನ್ನು) ಈ ಜಾಲತಾಣದಲ್ಲಿ ಈಗಾಗಲೇ ಪ್ರಕಟಿಸಲಾಗಿದ್ದು ಅದು ಈಗ ಕನ್ನಡ ಜನಕೋಟಿಯ ಮುಂದಿದೆ. ಜುಝ್ 'ಅಮ್ಮ ಎಂದು ನಾಮಕರಣಗೊಂಡ, ಪವಿತ್ರ ಕುರ್‌ಆನ್ ನ ಕೊನೆಯ ಅರ್ಥಾತ್ 30 ನೆಯ ಭಾಗದಲ್ಲಿರುವ ಎಲ್ಲ 37 ಸೂರಃ ಗಳ ಅನುವಾದವು ಈ ಜಾಲತಾಣದಲ್ಲಿ ಈಗ ಕನ್ನಡಿಗರಿಗೆ ಲಭ್ಯವಿದೆ. ಅದಲ್ಲದೆ ಸೂರಃ ಅಲ್-ಫಾತಿಹಃ, ಸೂರಃ ಅಲ್-ಬಕರಃ, ಸೂರಃ ಆಲಿ ಇಮ್ರಾನ್, ಸೂರಃ ಅನ್-ನಿಸಾ, ಸೂರಃ ಅಲ್‌-ಮಾಇದಃ, ಸೂರಃ ಅಲ್-ಅನ್‍ಆಮ್ ಮತ್ತು ಸೂರಃ ಅಲ್-ಅಅರಾಫ್ ಗಳ ಅರ್ಥವನ್ನು ಕನ್ನಡೀಕರಿಸುವ ಕಾರ್ಯವು ಇದೀಗ ಪೂರ್ಣಗೊಂಡಿದ್ದು ಪ್ರಸ್ತುತ ಸೂರಃ ಅಲ್-ಅನ್‌ಫಾಲ್ ನ ಅರ್ಥವನ್ನು ಕನ್ನಡಕ್ಕೆ ಅನುವಾದಿಸುವ ಕೆಲಸವು ಜಾರಿಯಲ್ಲಿದೆ.

ಓದುಗರು ತಮ್ಮ ಅಮೂಲ್ಯ ಅಭಿಪ್ರಾಯ ಮತ್ತು ಪ್ರಾಮಾಣಿಕ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಂಡರೆ ಇದನ್ನು ಇನ್ನಷ್ಟು ಹೆಚ್ಚು ಪ್ರಯೋಜನಕಾರಿಯಾಗಿ ಮಾಡಲು ನಮಗೆ ನೆರವಾಗಬಹುದು.

ಈ ಅನುವಾದದ ಬಗ್ಗೆ

ಈ ಕೃತಿಯಲ್ಲಿ ಬಳಸಿರುವ ಕಂಸ ಅಥವಾ ಆವರಣಗಳ ವಿವರಣೆ -- ( ) [ ] { }
ಈ ಭಾಷಾಂತರ ಕೃತಿಯ ಉದ್ದಕ್ಕೂ ಮೂರು ವಿಭಿನ್ನ ರೀತಿಯ ಕಂಸ ಅಥವಾ ಆವರಣಗಳನ್ನು ಬಳಸಿರುವುದನ್ನು ಓದುಗರು ಗಮನಿಸಬೇಕು. ಮೊದಲನೆಯದಾಗಿ, ಪವಿತ್ರ ಕುರ್‌ಆನ್ ನ ಅಭಿಜಾತ ಅರಬಿ ಭಾಷೆಯ ವಿಶಿಷ್ಠ ಶೈಲಿ, ಕೆಲವು ಪದಪ್ರಯೋಗ ಮತ್ತು ಅದಕ್ಕಿಂತಲೂ ಮುಖ್ಯವಾಗಿ ಅದರ ಅಶಾಬ್ದಿಕ ಸಂವಹನವನ್ನು ಕನ್ನಡೀಕರಿಸಲು ಸೂಕ್ತ ಕನ್ನಡ ಪರ್ಯಾಯಗಳು ಸಿಗದೇ ಹೋದಾಗ ಅವುಗಳನ್ನು ಸುಲಭವಾಗಿ ಅರ್ಥವಾಗುವಂತೆ ಮಾಡಲು ಇಂತಹ ( ) ಆವರಣಗಳನ್ನು ಅನಿವಾರ್ಯವಾಗಿ ಬಳಸಲಾಗಿದೆ. ಓದಗರು ಈ ರೀತಿಯ ಆವರಣಗಳನ್ನು ಒಂದು ತೊಡಕೆಂದು ಬಗೆಯದೆ ಒಂದು ಅನಿವಾರ್ಯವೆಂದು ಅರ್ಥೈಸಿ, ಅದನ್ನು ಅವಗಣಿಸದೆ ವಾಕ್ಯದೊಂದಿಗೆ ಸೇರಿಸಿ ಸರಾಗವಾಗಿ ಓದಿಕೊಂಡರೆ ಅಂತಹ ಆಯತ್ ಗಳ ಇಂಗಿತವು ಬಹುಮಟ್ಟಿಗೆ ಅರ್ಥವಾಗಲು ಸಹಾಯಕಾರಿಯಾಗುವುದು.

ಎರಡನೆಯದಾಗಿ, ಈ [ ] ರೀತಿಯ ಆವರಣಗಳನ್ನು ಬಳಸಿರುವುದು 'ವಿವರಣಾತ್ಮಕ ಟಿಪ್ಪಣಿಗಳನ್ನು' ಸಕಾಲಿಕವಾಗಿ ಒದಗಿಸುವ ಸಲುವಾಗಿ. ಇಂತಹ ಆವರಣಗಳಲ್ಲಿ ಕೊಡಲಾದ ವಿವರಣೆಯು ಆಯತ್ ಗಳಿಗೆ ಸಂಬಂಧಿಸಿದ ಸೂಕ್ತವಾದ ಸಕಾಲಿಕವಾದ ಹೆಚ್ಚುವರಿ ಮಾಹಿತಿಯೇ ಹೊರತು ಆಯತ್ ಗಳ ನೇರ ಅರ್ಥವಂತೂ ಅಲ್ಲ. ಕೆಲವೂಮ್ಮೆ ಓದುಗರ ಗೊಂದಲ ನಿವಾರಣೆಗಾಗಿ, ಕೆಲವೊಮ್ಮೆ ಎರಡು ಆಯತ್ ಗಳ ನಡುವಣ ಸಂಬಂಧವನ್ನು ತಿಳಿಸುವುದಕ್ಕಾಗಿ, ಮತ್ತೆ ಕೆಲವೊಮ್ಮೆ ಅನಿವಾರ್ಯವೆನಿಸಿದ ವಿವರಣೆಯನ್ನು ಅತ್ಯಂತ ಸಂಕ್ಷಿಪ್ತವಾಗಿ ಓದುಗುರ ಗಮನಕ್ಕೆ ತರಲು ಇಂತಹ ಆವರಣಗಳನ್ನು ಬಳಸಲಾಗಿದೆ. ಕುರ್‌ಆನ್ ನ ಸಾಮಾನ್ಯ ಜ್ಞಾನ ಹೊಂದಿರುವ ಓದುಗರಿಗೆ ಇದು ಅನವಶ್ಯಕ ಎಂದು ತೋಚಿದರೆ ಇದನ್ನು ಅವಗಣಿಸಲೂ ಬಹುದು.

ಇನ್ನು ಆಯತ್ ಗಳು ಅಂತ್ಯಗೊಳ್ಳುದನ್ನು ಅಥವಾ ಆಯತ್ ಗಳ ಒಂದು ಸಮೂಹವು ಅಂತ್ಯಗೊಳ್ಳುವುದನ್ನು ಗುರುತಿಸಲು ಇಂತಹ { } ಆವರಣಗಳನ್ನು ಬಳಸಿ ಅದರಲ್ಲಿ ಆಯಾ ಆಯತ್ ನ ಅಥವಾ ಸಮೂಹದಲ್ಲಿ ಬರುವ ಆಯತ್ ಗಳ ಸಂಖ್ಯೆಯನ್ನು ಕೊಡಲಾಗಿದೆ. ಕುರ್‌ಆನ್ ನ ವಚನಗಳನ್ನು ಉಲ್ಲೇಖಿಸಲು, ಉದ್ಧರಿಸಲು ಅಥವಾ ಇತರ ತರ್ಜುಮೆಗಳೊಂದಿಗೆ ಹೋಲಿಸಿ ತುಲನಾತ್ಮಕ ಅಧ್ಯಯನ ನಡೆಸಲು ಇದು ತುಂಬಾ ಉಪಯುಕ್ತವಾಗಬಹುದು.

ಆವರಣಗಳ ಬಳಕೆಯು ಅನುವಾದಕನ ಒಂದು ಅಗತ್ಯ ಮತ್ತು ಅನಿವಾರ್ಯತೆ ಎಂದು ತಿಳಿದು ಸಹೃದಯಿಗಳು ಈ ಕೊರತೆಯನ್ನು ಮನ್ನಿಸಬೇಕು. ಓದುವಾಗ ಉಂಟಾಗಬಹುದಾದ ತೊಡಕಿಗಾಗಿ ಕ್ಷಮೆ ಇರಲಿ!

ಇತರ ಚಿಹ್ನೆಗಳು
ಓದುಗರ ಮತ್ತು ಕಂಠಪಾಟ ಮಾಡುವವರ ಅನುಕೂಲಕ್ಕಾಗಿ ಕುರ್‌ಆನ್ ಗ್ರಂಥದ ಮೂಲ ಪಠ್ಯವನ್ನು 30 ಸಮ ವಿಭಾಗಗಳನ್ನಾಗಿ ವಿಂಗಡಿಸಿಕೊಳ್ಳುತ್ತಾರೆ. ಅಂತಹ ವಿಭಾಗೀಕರಣದ ಪ್ರತಿ ವಿಭಾಗವನ್ನು 'ಜುಝ್' ಎಂದು ಹೆಸರಿಸಿದ್ದಾರೆ. ಈ ಕೃತಿಯಲ್ಲಿ ಪ್ರತಿ ಜುಝ್ ನ ಆರಂಭವನ್ನು ಗುರುತಿಸಲು ಆಯಾ ಜುಝ್ ನ ಕ್ರಮಸಂಖ್ಯೆಯನ್ನು ನಮೂದಿಸುವುದರ ಜೊತೆಗೆ ಕ್ರಮಸಂಖ್ಯೆಯ ಅತ್ತಿತ್ತ ✽ಸಂಖ್ಯೆ✽ ಚಿಹ್ನೆಯನ್ನು ಬಳಸಿ ಅದನ್ನು ಕೆಂಪು ಬಣ್ಣದಲ್ಲಿ ಇರಿಸಲಾಗಿದೆ. ಉದಾಹರಣೆಗೆ, ಎಂಟನೆಯ ಜುಝ್ ನ ಆರಂಭವು ಸೂರಃ ಅಲ್ ಅನ್ಆಮ್ ನ ನೂರ ಹನ್ನೊಂದನೆಯ ಆಯತ್ ನೊಂದಿಗೆ ಆಗುತ್ತದೆ. ಅದನ್ನು ಗುರುತಿಸಲು ಆ ಆಯತ್ ನ ಆರಂಭದಲ್ಲಿ ✽8✽ ಎಂದು ನಮೂದಿಸಲಾಗಿರುವುದನ್ನು ಗಮನಿಸಿ.

ಕುರ್‌ಆನ್ ನ ಕೆಲವು ನಿರ್ದಿಷ್ಟ ವಚನಗಳನ್ನು ಓದುವಾಗ ಪೈಗಂಬರರು ಅದರ ಘನತೆ ಗಾಂಭೀರ್ಯಗಳನ್ನರಿತು ಆ ಕೂಡಲೇ ಅಲ್ಲಾಹ್ ನಿಗೆ ಸಾಷ್ಟಾಂಗವೆರಗುತ್ತಿದ್ದರು. ನಮಾಝ್ ಗಳಲ್ಲಿ ಕುರ್‌ಆನ್ ಪಠಿಸುವ ವೇಳೆ ಸಹ ಅಂತಹ ಆಯತ್ ಗಳು ಬಂದಾಗ ಪೈಗಂಬರರೂ, ಅನುಯಾಯಿಗಳೂ ತಮ್ಮ ನಮಾಝ್ ಗಳಲ್ಲಿ ಸಹಜವಾಗಿಯೇ ಅಂತಹ ಸಾಷ್ಟಾಂಗವೆರಗುತ್ತಿದ್ದರು. ಅದಕ್ಕೆ ಇಸ್ಲಾಮ್ ನ ಪರಿಭಾಷೆಯಲ್ಲಿ 'ಸಜ್ದಃ ಅತ್‌-ತಿಲಾವಃ' ಎಂದು ಹೇಳುತ್ತಾರೆ. ಕುರ್‌ಆನ್ ನಲ್ಲಿ ಅಂತಹ ಹಲವು ಆಯತ್ ಗಳನ್ನು ಗುರುತಿಸಿಲಾಗಿದೆ. ಈ ಕೃತಿಯಲ್ಲಿ ಅಂತಹ ಆಯತ್ ಗಳನ್ನು ಓದುಗರು ಗುರುತಿಸಿಕೊಳ್ಳಲು ಆಯಾ ಆಯತ್ ಗಳ ಕೊನೆಯಲ್ಲಿ ۩ ಚಿಹ್ನೆಯನ್ನು ಬಳಸಲಾಗಿದಿ. ಉದಾಹರಣೆಗೆ ಅಲ್ ಅಅರಾಫ್ (7 ನೆಯ ಸೂರಃ) ನ 206 ನೆಯ ಆಯತ್ ಅಥವಾ ಅಲ್ ಅಲಕ್ (96 ನೆಯ ಸೂರಃ) ನ 19 ನೆಯ ಆಯತ್ ನೋಡಿರಿ.

ಇಕ್ಬಾಲ್ ಸೂಫಿ
ಸಾಲ್ಮಿಯ - ಕುವೈತ್
------------------------------------

ಅನುವಾದಿತ ಸೂರಃ ಗಳು: